ನಿತ್ಯ ಸತ್ಯ

ದಶಮಾನದ ಗುಂಟ ಹೊಸೆದ ಹುರಿಹಗ್ಗ
ಮೆಲ್ಲಮೆಲ್ಲನೆ ಬಿಗಿತ ಬಿಚ್ಚುತ ಈಗ
ನೂಲಿನ ಎಳೆಗಳ ನಡುವೆ ನಿಂತಿದೆ ನೋಡು,
ಯಾವ ಕ್ಷಣ ಕಡಿಯುವುದೋ ನಮ್ಮ ನಂಟು.

ಆ ಹಾರಾಟ ಹೋರಾಟ, ಕ್ಷಣಕ್ಷಣದ ಜಂಜಾಟ
ನಿನ್ನನನ್ನಮೇಲೆಕೆಳಗೆ ಜಗ್ಗಾಡಿದುದೆಷ್ಟೋ,
ಸಂತಸದ ಭರದಿಂದ ಎಲ್ಲ ನೋವುಗಳನುಂಡು
ನಮ್ಮ ದಿನಗಳ ನಾವು ಕನವರಿಸಿದುದೆಷ್ಟೋ.

ಕಾಲದ ಹರಿತದಲಿ ನೆನೆದು ತೊಯ್ದ ಹುರಿಹಗ್ಗ,
ಕಾಲದ ಎಳೆತದಲಿ ಬಿಗಿತ ಬಿಟ್ಟ ಆ ಹುರಿಹಗ್ಗ
ದಕ್ಷಿಣೋತ್ತರವಾಗಿ ಹರಿದು ಹರಿಹಂಚಾಗಿ
ಮತ್ತೆಂದೂ ಕೂಡದ ಹಾಗೆ ಸಿಡಿದು ನಿಂತಿದೆಯಲ್ಲ.

ಇದು ಒಂದೆರಡು ದಿನಗಳ ತುರ್ತು ಪ್ರಕ್ರಿಯೆಯಲ್ಲ,
ಅದೃಷ್ಟದ ತೆರೆಗಳು ತಂದ ತ್ಸುನಾಮಿಯಲ್ಲ;
ಒಂದುಎರಡು ಮೂರುನಾಲ್ಕಾಗಿ ಮೊರೆದ ಮೊರೆತ,
ನಿಧನಿಧಾನ ನಿನ್ನನನ್ನನ್ನಾವರಿಸಿದ ವಿಧಿಯ ಕೊರೆತ.

ಈಗ ಎಲ್ಲವೂ ನಿರ್ವಾತ, ಶೂನ್ಯ, ವಿವರ್ಣ,
ಕೊನೆಯ ವಿಘಟನೆಯ ಕಾಯುವುದರ ಹೊರತು;
ಮಧ್ಯಾಹ್ನ ಕಳೆದು ಮುಸ್ಸಂಜೆ ಕಗ್ಗತ್ತಲಾಗಿರುವಾಗ,
ಕಳೆದ ದಿನಗಳ ಶೂಲ ತಿವಿಯುತ್ತಿದೆ ನಿನ್ನನನ್ನ.

ಒಂದು ಎರಡಾದುದು ಮತ್ತೆ ಒಂದಾಗುವುದಿಲ್ಲ,
ಮೊಸರಾಗಿ ಒಡೆದ ಹಾಲು ಮತ್ತೆ ಹಾಲಾಗುವುದಿಲ್ಲ;
ಬೆನ್ನುಬೆನ್ನಿಗಿಟ್ಟು ದೂರದೂರ ಓಡುತ್ತಿರುವ ನಾವು
ಮತ್ತೆಂದೂ ಮಗದೊಮ್ಮೆ ಬೆಸೆಯುವ ಹಾಗಿಲ್ಲ.

ದಶಮಾನದ ನಮ್ಮ ಪರಸ್ಪರ ಒರೆತ ಮೊರೆತ,
ಆಭರತ ಇಳಿತ ಮೇಲೇರಿ ಆವಿಯಾಗಬೇಕೆ?
ಮೂಲವನ್ನೇ ಕಿತ್ತು ಮತ್ತೆ ಮೇಲೇರದಂತೆ
ಲೋಕದ ನಿರ್ಭರತೆಯಲ್ಲಿ ಲೀನವಾಗಬೇಕೆ?

ನಿನ್ನ ದಾರಿ ನಿನಗೆ, ಇನ್ನು, ನನ್ನದು ನನಗೆ,
ನಡೆದುದೆಲ್ಲ ಸಾಗರದ ಕ್ಷಣಿಕ ಭರತ ಇಳಿತ,
ಜೀವಕ್ಕೆ ಜೀವ, ಶ್ವಾಸಗಳ ಹೊಸೆದಿದ್ದ ನಾವು
ಮುಂದೆ ಅಜ್ಞಾತ ಆಗಂತುಕರು, ಯಾರು ಯಾರೋ.

ಆ ಗಾಢತೆ ತೀವ್ರತೆ ಹೀಗೆ ಮರೆಯಾಗುವುದು ಹೇಗೆ,
ಆ ತ್ಯಾಗ ಅರ್ಪಣೆ ಸಿಹಿ ಭಾವ ಎಡವುದೇ ಹೀಗೆ?
ನಿನ್ನನನ್ನ ಮಧ್ಯದ ಆ ವಜ್ರದುಂಗುರದ ಬಂಧ
ಕಾಲದೊತ್ತಡದಲ್ಲಿ ಹೀಗೆ ದ್ರವೀಕರಿಸಬೇಕೆ?

ನೀನು ನೀನಾಗಿಲ್ಲ, ನಾನು ನಾನಾಗಿಲ್ಲ, ಈಗ,
ನೀನುನಾನು ಪ್ರೀತಿಬೆಳಕು ಮರೆಯಾಯಿತು ಬೇಗ;
ಲೋಕಸಾಗರದಗಣಿತ ಈಜುವ ಮೀನುಗಳ ನಡುವೆ
ಈಜಾಡುವ ಬರಿಯ ಕ್ಷುಲ್ಲಕ ಮೀನುಗಳಷ್ಟೆ ನಾವು.

ಸ್ಥಿರತೆ ನಿತ್ಯತೆಯೊಂದು ಮನಸಿನಾಳದ ಭ್ರಾoತು,
ಅಸ್ಥಿರತೆಯೊಂದೆ ಸ್ಥಿರತೆ ಸತ್ಯ ನೋಡಿದಲ್ಲೆಲ್ಲ;
ಅಸ್ಥಿರತೆಯ ಮಧ್ಯೆ ಸ್ಥಿರತೆ ನಿತ್ಯತೆ ಬಯಸಿದ ನಾವು
ಲೋಕಚರ್ಯೆಗೆ ಮೀರಿ ಕನವರಿಸಿದುದು ತಪ್ಪು.

ನಮ್ಮಳವು ಮೀರಿದನಂತ ಪ್ರಪಂಚದಲ್ಲಿ
ನೀನುನಾನೆಂಬ ವೈಶಿಷ್ಟ್ಯ ಮೆರೆದುದೊಂದು ತಪ್ಪು;
ನೀರಿನೊಳಗಿನ ಬರಿಯ ನಿಸ್ಪ್ರಹ ನೀರು ನೀನುನಾನು,
ನಿನ್ನನನ್ನ ಸಂಬಂಧ ಭಂಗುರ ನಿರರ್ಥಕ ನೋಡು.

ಆದರೂ ಒಳಗೊಳಗೆ ತುಡಿಯುತ್ತಿದೆ ಈಗ -
ನಿನ್ನನನ್ನ ಸಂಬಂಧ ಮಾತ್ರ ನಿತ್ಯ ಸತ್ಯ;
ನೀರೊಳಗಿನ ನೀರಿರಲಿ, ಅಸ್ಥಿರತೆಯೆ ಇರಲಿ,
ನೀನುನಾನು, ನನಗೆನಿನಗೆ ಮಾತ್ರ ನಿತ್ಯ ಸತ್ಯ.

by Praveen Kumar in Bhavana

Comments (1)

Look at the threads between the threads, It's our turn to knock down any moment. New leaflet across the decade is seen. Whether in water or water, love is the only truth for time. A nice and brilliant Kannada poem is excellently penned...10