ನಿನ್ನ ಲಗಾಮಿನಮಕೆಯಲಿ ಜಿಗಿಯಲಿ ಗಗನಕ್ಕೆ ನಮ್ಮ ಕುದುರೆ

ನಿನ್ನ ಸಾರ್ವಭೌಮತ್ವಕ್ಕೆ, ತಲೆವಾಗಿ,
ನಿನ್ನ ಲೋಕದಲಿ, ಬೇರು ಬಿಟ್ಟಿರುವ ನಮಗೆ,
ನಿನ್ನ ನೀತಿ ನಿಯಮಗಳ ಪರಜ್ಞಾನ ನೀಡು;
ಎಲ್ಲಿ, ಏನು, ಹೇಗೆಂದು,
ಯಾಕೆ, ಇದು, ಹೀಗೆಂದು,
ನಮಗೆ, ನಿನ್ನನ್ನು ಬಿಟ್ಟು, ಹೇಳುವವರು ಯಾರು?
ಏರು ತಗ್ಗುಗಳಲ್ಲಿ ಏರಿಳಿಸಿ, ನಡೆಸುವವರು ಯಾರು?

ಇಲ್ಲಿ, ನಿನ್ನೀ ಲೋಕದಲ್ಲಿ, ಪ್ರತಿಯೊಂದು ವಿಚಿತ್ರ,
ಕಣ್ಣಿಗೆ ಕಾಣುವುದು ಕಲಿತ ಕಾರಣಗಳು ಮಾತ್ರ;
ಒಳಗೊಳಗೆ ನಡೆಯುವ, ರೀತಿ, ನೀತಿಗಳೆ ಬೇರೆ;
ಮುಂದೆ ಹೋದವರು, ಹಿಂದೆ,
ನಿಂತೆ ಬಿಟ್ಟವರು, ಬಲು ಮುಂದೆ,
ಯಾಕೆ ಏಕೆಂದು, ಕೆಳಗೆ ದುಮುಕಿದವರು, ಮೇಲೇರಿ ಹೋದುದಿದೆ,
ಮುಂದೆ ಮುಂದೆಯೆಂದು, ಅಳೆದು ಹೆಜ್ಜೆ ಇಟ್ಟವರು, ನಿಂತಲ್ಲೆ ನಿಂತುದಿದೆ.

ಭೂತಭವಿಷ್ಯತೆಂದು, ವರ್ತಮಾನ ಮರೆಯುವವರು ನಾವು,
ಹಿಂದೆ ಮುಂದೆಯೆಂದು, ಕಾಲೂರಿದ ತಾಣ ಮರೆಯುವವರು ನಾವು;
ನಮಗೆ, ನಮ್ಮದೆ, ಭಿನ್ನ ರೀತಿ, ನೀತಿ, ನಿಯಮ ತಾಗಾದೆ;
ಅದರಿಂದಲೆ, ಎಲ್ಲ ಆಭಾಸ,
ಅನ್ಯಾಯ, ನಿರಾಶೆ, ನೋವು, ಮೋಸ;
ನಿನ್ನನ್ನು, ನಿನ್ನ ದಾರಿ, ನಿರೀಕ್ಷೆಗಳನರಿತರೆ ಮಾತ್ರ, ಮೋಕ್ಷ ನಮಗೆ,
ನಮ್ಮ ಪ್ರವೃತ್ತಿಗಳ ಮೀರಿನಿಂತರೆ ಮಾತ್ರ, ರಕ್ಷೆ ನಮಗೆ.

ಕೆಟ್ಟದೊಳ್ಳೆಯದು, ನಮ್ಮ ಪರಿಮಿತ ಚಿಂತನೆಯ ಭ್ರಾಂತುಗಳು,
ಮೇಲೆಕೆಳಗೆನ್ನುವುದು, ನಮ್ಮ ವಿಶ್ರಾಮದ ಹುಡುಗಾಟಗಳು;
ಸರಿತಪ್ಪು, ನಾವು ನಮಗಾಗಿ ವಿಧಿಸಿದ ಬಾಲಿಶ ರೇಖೆಗಳು;
ನಮ್ಮ ನಿರ್ಮಿತಿಯ ಬಲೆಯಲ್ಲೆ ನಾವು,
ಸಿಕ್ಕಿ ಅನುಭವಿಸುವೆವೆಲ್ಲ ನೋವು;
ನೀನು ಮುಂದೆ ನಡೆಸದ ವಿನಹ, ಈ ಗತಿ ತಪ್ಪಿದಲ್ಲ,
ಮುಟ್ಟಿದ್ದೆಲ್ಲ ಮುಗಿ ಬೀಳುವ ಈ ಭೀತಿ ನಿಲ್ಲುವುದಿಲ್ಲ.

ನಿನ್ನ ತೋಟದ ಬೇಲಿಯ ಮಿತಿಯಲ್ಲೆ, ನಮ್ಮ ಹೂವು ಅರುಳುವಂತೆ ಹರಸು,
ನಿನ್ನ, ನಮ್ಮ, ರೀತಿ ನಿಯಮಗಳು ಮೇಲಾಡದಂತೆ ನಡೆಸು;
ನಿನ್ನ ಲಗಾಮಿನಮಕೆಯಲಿ ಜಿಗಿಯಲಿ ಗಗನಕ್ಕೆ ನಮ್ಮ ಕುದುರೆ;
ಆಗಲೆ, ಎಲ್ಲ ತೃಪ್ತಿ, ಸಮರಸತೆ,
ಶಾಂತಿ, ಸಮಾಧಾನ, ಸುಖದ ಒರತೆ;
ಈ ಲೋಕಕ್ಕೆ ನಾವು, ನಮಗಾಗಿ ಲೋಕವೆಂಬ ಪರಸ್ಪರತೆ, ಸಹಾಯ,
ಬಾಹ್ಯಾಂತರಿಕ್ಷದೊಳಗೆ ಸಖ್ಯ, ಸಾಮರಸ್ಯ, ಪೂರಕತೆ, ನ್ಯಾಯ.

by Praveen Kumar in Bhavana

Comments (0)

There is no comment submitted by members.