ಬೆಸೆಯಬೇಕು

ಎಷ್ಟು ದೂರ ನಡೆದರೇನು,
ಎಷ್ಟು ಬಾರಿ ಕರೆದರೇನು,
ನಮ್ಮ ದಾರಿ ಕೂಡದಾಗ,
ನಮ್ಮ ಹಾಡು ಹಾಡದಾಗ,
ನಮ್ಮ ದಾರಿ ಬೇರೆ ತಾನೆ,
ನಮ್ಮ ಓಟ ಬೀಳು ತಾನೆ.

ದ್ರುವದಿಂದ ದ್ರುವವರೆಗೆ
ನಮ್ಮ ಮಿಂಚು ಸ್ಫುರಿಸದಾಗ,
ತೀರದಿಂದ ತೀರವರೆಗೆ
ನಮ್ಮ ನಾವೆ ಹಾಯದಾಗ,
ನೀನು ನಾನು ಬೇರೆ ತಾನೆ,
ನಮ್ಮಸ್ಥಿತ್ವ ಈಗ ಭಿನ್ನ ತಾನೆ.

ಕಾಲಗುಂಟ ನಾವು ಹರಿದು
ಸ್ನೇಹ ಪ್ರೀತಿಯಿಂದ ಬಿಗಿದು,
ಈಗ ನೋಡು ನಮ್ಮ ಪಾಡು,
ಕರುಳು ತುಡಿವ ವಿರಹ ಹಾಡು,
ಬೇರೆ ಬೇರೆ ದಿಕ್ಕಿನಲ್ಲಿ
ಬೇರು ಮರೆತು ನಡೆವ ರೀತಿ.

ಎಲ್ಲೋ ಏನೋ ಕೊಂಡಿ ಕಳಚಿ,
ಮಾಡಿಟ್ಟ ಭಕ್ಷ್ಯ ಹೇಗೋ ಹಳಸಿ,
ಯಾಕೋ ಏನೋ ತಪ್ಪಿದೆ,
ಪ್ರಕೃತಿಯೆ ಮುನಿಸಿದಂತಿದೆ,
ದಿಕ್ಕು ದಾರಿ ತಪ್ಪಿ ಹೋಗಿ
ಎಲ್ಲೆಲ್ಲೋ ನಮ್ಮನ್ನೆಳೆದಿದೆ.

ಮಾಡಿಟ್ಟದ್ದೊಂದೆ ನಮಗೆ ಲಬ್ಧ,
ಬೆನ್ನು ಹಿಡಿಯುವ ಪ್ರಾರಬ್ಧ;
ಕೂಡಿಟ್ಟದ್ದನ್ನು ಕಳಚಿ ನಾವು,
ಹೊಸತು ಉಡುಪು ಧರಿಸಿ ಬೇಗ
ಹೊಸತು ದಿಕ್ಕು ದಾರಿಯಲ್ಲಿ
ಓಡಿ ನಡೆದು ಸೇರಬೇಕು.

ಸಾಣೆ ಹಿಡಿದ ಅಸ್ತ್ರದಂತೆ,
ಪುಟ್ಟ ಹಸುಳೆಯ ನಗುವಿನಂತೆ,
ಫಳಫಳಿಸುವ ಪ್ರೀತಿಯಲ್ಲಿ
ನೀನು ನಾನು ಸೇರಬೇಕು,
ಮತ್ತೆ ದಾರಿ ಕಾವಲಾಗದಂತೆ
ನೀನು ನಾನು ಬೆಸೆಯಬೇಕು.

by Praveen Kumar in Bhavana

Comments (0)

There is no comment submitted by members.