ಸಾಗರದ ತೆರೆಗಳು

ನಾನೆಷ್ಟು ಹಾತೊರೆದರೂ
ಕೂಗಿ ಕರೆದರೂ
ನೀ ಬರಲಾರೆ ಚಿನ್ನ,
ನೀನೆಷ್ಟು ಬಯಸಿದರೂ
ಕಣ್ಣೀರಿಕ್ಕಿದರೂ
ಬಂದು ಸೇರಲಾರೆ ನನ್ನ.

ನಮ್ಮ ಶುಷ್ಕ ಕರೆಗಳು
ಸಾಗರದ ತೆರೆಗಳು,
ಇರುವುದು ನಿಮಿಷಾರ್ಧ ಮಾತ್ರ,
ಮೇಲೇರಿ ಇಳಿದು
ಸಾಗರಕೆ ಸರಿದು,
ಆ ಮೇಲೆ ಎಲ್ಲವೂ ಸ್ತಬ್ಧ.

ಸಾವಿರ ಮರೆಗಳ ಆಚೀಚೆ
ನಿನ್ನ ನನ್ನ ವಾಂಛೆ
ಗಾಳಿಗೋಪುರದಂತೆ ಬರಿದು,
ಲೋಕ ನೂಕಾಟದ ಮಧ್ಯೆ,
ನಮ್ಮೊಳಗಿನ ತುಡಿತ
ಮೇಳೈಸಿ ಚಿಗುರಿ ಬರದು.

ನೀನೆಲ್ಲೋ ಬಲು ದೂರದಲ್ಲಿ,
ನಾನೋ ಏಕಾಂಗಿ ಇಲ್ಲಿ,
ರಾಹು ಕೇತುಗಳಂತೆ ದೂರ ದೂರ,
ನಿನ್ನ ಬೆಂಬತ್ತಿ ನಾನು,
ನನ್ನ ಬೆಂಬತ್ತಿ ನೀನು,
ಸುತ್ತಿ ಸುತ್ತಿ ಬಳಲಿದೆ ಜೀವ.

ಇಂದಲ್ಲದಿದ್ದರೆ ನಾಳೆ,
ಅದಲ್ಲದಿದ್ದರೆ ಆ ಮೇಲೆ
ನಾವು ಸೇರುವೆವೆಂಬ ಆಶೆ,
ಆಶೆಯ ಬೆನ್ನೇರಿ ನಾವು
ಕಣ್ಣು ಮುಚ್ಚಿ ಮರೆತು ನೋವು
ಓಡುವೆವು ಮುಂದೆ ಮುಂದೆ.

ನೀರಿನಂತೆ ಅಬೇಧ್ಯರು ನಾವು,
ಗಾಳಿ ಬೆಂಕಿಗಳಂತೆ ಒಂದೆ ಒಂದು,
ಒಂದಿದ್ದೂ ಎರಡಾದುದರ ನೋವು
ಅನುಭವಿಸಿದವರಿಗೆನೆ ಗೊತ್ತು,
ಹೋಳಾದುದು ಮತ್ತೆ ಸೇರುವವರೆಗೆ
ಮತ್ತೆಲ್ಲಿಯ ಶಾಂತಿ ನಿನಗೆ ನನಗೆ?

by Praveen Kumar in Divya Belaku

Comments (0)

There is no comment submitted by members.