ವಿಸ್ಮಯದ ಪ್ರಶ್ನೆ

ಅವಳು ಅಂತಿಂತವಳಲ್ಲ,
ಸಾಕ್ಷಾತ್ ಶಾರದೆ, ವಿದ್ಯಾಲಂಕೃತೆ,
ಹೆಜ್ಜೆಹೆಜ್ಜೆಯಲೂ ನೈಜ್ಯ ಲಜ್ಜೆ,
ತಲೆಯೆತ್ತಿ ಸ್ವರವೆತ್ತಿ ನುಡಿದವಳಲ್ಲ,
ಕಪಟ ಕೃತ್ರಿಮ ಅವಳಿಗೆ ಗೊತ್ತೇ ಇಲ್ಲ,
ಏನಿದ್ದರೂ ಸ್ಪಷ್ಟ, ಸುಸ್ಪಷ್ಟ,
ಮರೆಮಾಚುವವಳಲ್ಲ,
ಒಗಟು ದ್ವಂದ್ವಕ್ಕೆ ಬಲು ದೂರ.

ಪರರ ನೋಯಿಸುವವಳಲ್ಲ,
ವಿನಾ ಕಾರಣ ನುಡಿಯುವವಳಲ್ಲ,
ಅಹಿತವಾದರೆ ದೂರ ದೂರ,
ಹಿತವಾದರೆ ಜೀವ ಜೀವ,
ಆದರೂ ದಿಟ್ಟೆ,
ಎಲ್ಲರನು ಒಲಿಯುವವಳಲ್ಲ,
ಯಾರ ಬಲೆಗೂ ಬೀಳುವವಳಲ್ಲ,
ಜಾಣೆ, ಚತುರೆ, ಜೀವಂತ ಪ್ರತಿಭೆ,
ಮಲ್ಲಿಗೆಯ ದಂಡೆ ಅವಳು,
ಗುಲಾಬಿಯ ಶೃಂಗಾರ,
ಲಾವಣ್ಯದ ಖನಿ ಅವಳು,
ಸ್ತ್ರೀತ್ವದ ಮಣಿ, ರತ್ನ, ವಜ್ರ,
ಹುಡುಕಿಯೂ ಸಿಗದ
ಕಲಿಕಾಲಕ್ಕೆ ದಕ್ಕದ
ಅಪೂರ್ವ ಸಂಗಮ ಅವಳು.

ನಿಸ್ವಾರ್ಥಿ, ಸ್ವಯಂ ಪ್ರಜ್ಞೆ ಕಿಂಚಿತ್ತೂ ಇಲ್ಲ,
ಸ್ವಪ್ರತಿಷ್ಠೆಯ ಮಾತೇ ಇಲ್ಲ,
ಸದಾ ಹಸನ್ಮುಖಿ,
ಕಣ್ಣಲ್ಲಿ ಮಿಂಚು,
ಲವಲವಿಕೆಯ ಕಿಡಿ ಗೊಂಬೆ,
ಏನೋ ಹುರುಪು, ಲಾಸ್ಯ,
ನಿರಾಡಂಬರ ಸೌಂಧರ್ಯ,
ಅವಳಿಗೆ ಅವಳೇ ಸಾಟಿ,
ಬೇರೆಲ್ಲೆಲ್ಲೂ ನಾನು ಕಂಡಿಲ್ಲ;
ಇದೇನು ಕಲ್ಪನೆಯ ಕೆತ್ತನೆಯಲ್ಲ
ಈ ಶ್ರೀಗಂಧದ ಮೂರ್ತಿ,
ಅಮೂಲ್ಯ ದಂತದ ಪ್ರತಿಮೆ,
ಈ ಕಾಲ ಕಂಡರಿಯದ
ಸ್ತ್ರೀತ್ವದ ರಾಶಿ, ಶ್ರೀ ದೇವಿ.

ಕಲಿಕಾಲದ ಕಲಿತ್ವ ಇಲ್ಲವೇ ಇಲ್ಲ,
ಆತ್ಮಪ್ರವರ್ತನೆಗೆಳಸುವವಳಲ್ಲ,
ಹಕ್ಕು ಹೊಣೆ ಜಂಜಾಟ ಅವಳಿಗೆ ಸಲ್ಲ,
ಅವಳ ವಿನಯ ತಿಳಿದವನೆ ಬಲ್ಲ;
ಹೋರಾಟ ಹಾರಾಟಕೆ ಅವಳು ಬಲು ದೂರ,
ಇದ್ದುದರಲ್ಲೇ ತೃಪ್ತೆ, ಸಮಾಧಾನ, ಸಂತೃಪ್ತೆ,
ತಿಳಿಯದ ಶಾರೂಖ್ ತೆಂಡೂಲ್ಕರ್ ಗೊಡವೆ ಇಲ್ಲ,
ಫೇಸ್ ಬುಕ್ ಸ್ನೇಹಿತರು ಅವಳಿಗೆ ಬೇಕಿಲ್ಲ,
ಎಲ್ಲ ಕಾಲಕ್ಕೂ ಆದರ್ಶೆ, ಸಲ್ಲುವವಳು,
ಈ ಕಾಲಕ್ಕೆ ಬಹುಶಃ ಸಲ್ಲದವಳು;
ದೇವಲೋಕದಿಂದಿಳಿದು ಈಗ ಇಲ್ಲಿ
ಬಂದಳೆಂತೆನ್ನುವುದೆ ವಿಸ್ಮಯದ ಪ್ರಶ್ನೆ.

by Praveen Kumar in Divya Belaku

Comments (0)

There is no comment submitted by members.