ಹಾದಿ

ಹಾದಿ ಸುಗಮವಿರುವಾಗ,
ರತ್ನಗಂಬಳಿ ಹಾಸಿರುವಾಗ,
ಎದುರಿರುವ ದಾರಿಯಲಿ ನಡೆವುದೆ ಜಾಣತನ;
ಇಲ್ಲಸಲ್ಲದ ಕಾರಣದಿಂದ
ಎಡಬಲ ಪ್ರಥಕ್ಕರಿಸಿ
ಹಿಂದೆಮುಂದೆ ನೋಡುವುದು ಮೂರ್ಖತನ.

ನಮ್ಮೆದುರು ದಾರಿಯಿತ್ತು,
ಮುನ್ನಡೆಯುವ ಶಕ್ತಿಯಿತ್ತು,
ವಿನಾಕಾರಣ ಹಿಂದೆ ಹಿಂದೆ ಉಳಿದು ಬಿಟ್ಟೆ;
ಚಾಚಿದ ಕೈಯ ಕೊಡವಿ ನೀನು
ಮುಂದಕ್ಕಿನ್ನು ಬರೇನು ಎಂದು
ಯಾಕೆ ಹಾಗೆ ಸ್ನೇಹ ಸೂತ್ರ ಕಡಿದು ಬಿಟ್ಟೆ?

ರಾಜವೀಧಿ ಎದುರಲ್ಲಿತ್ತು,
ಛತ್ರಚಾಮರ ಜೊತೆಯಲ್ಲಿತ್ತು,
ಜನಸ್ತೋಮದ ಜಯಜಯ ಘೋಷ ಮಧ್ಯೆ
ರಾಜಮಹಲು ಕರೆಯುವಾಗ,
ಹೂವುಮಳೆಯು ಉದುರುವಾಗ,
ಅದಾವ ಕಟ್ಟು ನಿನ್ನ ನಡಿಗೆ ನಿರ್ಬಂಧಿಸಿತೊ?

ನೀನೆ ಹಿಂದೆ ಉಳಿದ ಮೇಲೆ
ನನಗೆ ಮುಂದೆ ಏನು ಕೆಲಸ,
ಅರ-ಸೆರೆಮನೆ ಮುಂದೆ ಮುಂದೆ ಒಂದೆ ನನಗೆ;
ರಾಜವಾಳಗ ದರ್ಭಾರು
ಪಾಲುಬೀಳು ಹಾಳುಬಂಜರು,
ಸೌಗಂಧವನ್ನೆ ಕಳೆದುಳಿದ ಒಣ ಹೂವಿನಂತೆ.

ಹಾದಿ ಈಗ ಸುಗಮವಿಲ್ಲ,
ಕತ್ತಲೆಲ್ಲೆಡೆ ತುಂಬಿದೆ,
ಕಲ್ಲುಮುಳ್ಳಿನ ದಾರಿಯಲ್ಲಿ ಏರುತಗ್ಗು ನಿಂತಿದೆ;
ಎದ್ದುಬಿದ್ದು ನಡೆಯುವಾಗ,
ಕಳೆದ ದಿನಗಳ ನೆನೆಯುವಾಗ,
ನಮ್ಮ ಬಂಧ ಕಡಿದ ನೋವು ನನ್ನ ಎದೆಯ ಚಿವುಟಿದೆ.

ಹೋದ ದಾರಿ ಸಿಗುವುದಿಲ್ಲ,
ಹೊಸತು ಹಾದಿ ಬರುವುದಿಲ್ಲ,
ಇದ್ದಬಿದ್ದ ದಾರಿಯಲ್ಲೆ ನಡೆಯಬೇಕು ಇನ್ನು ಮುಂದೆ;
ಎದುರು ಬಂದ ದಾರಿಯನ್ನು
ಕಾಲಿಂದೊದೆದು ನಡೆದ ಮೇಲೆ
ಬಂದದನ್ನೆ ಭಾಗ್ಯವೆಂದು ನೀನುನಾನು ತಿಳಿಯಬೇಕು.

by Praveen Kumar in Bhavana

Comments (0)

There is no comment submitted by members.