ದಿಗಂತದಾಚೆ...

ದಿಗಂತದಂಚಲ್ಲಿ ನಿಂತು ನಗುತ್ತಿರುವ ನೀರೇ,
ಶಂಕೆಯಬಿಟ್ಟು ನನ್ನಲ್ಲಿ ಹಾರಿ ಬಾರೆ,
ಮರೆಯಲ್ಲಿ ನಿಂತು, ಈ ಪರಿಯ ಆಟ ಬೇಕೆ,
ಸಂಕೋಚ ಬಿಟ್ಟು ರೆಕ್ಕೆಬಿಚ್ಚಿ ಬಳಿ ಬಾರೆ.

ದಿಗಂತದಾಚೆ ನೆಗೆದರೆ ಮತ್ತೆ ಶೂನ್ಯ ಎಲ್ಲ,
ನನ್ನತ್ತ ಸರಿದರೆ ಸಮಾಗಮದ ಮಹಾಪೂರ;
ಇತ್ತ ಜೀವನವೆಲ್ಲ ಸುಖ ಸುಲಭವೆಂದೇನಲ್ಲ,
ನಿನ್ನನನ್ನ ಬಿಗಿಬೇಸೆತದಲ್ಲಿಲ್ಲಿ ಮರೆವೆವು ಎಲ್ಲ.

ನಿನ್ನೊಳಗಿನ ಭಯಭೀತಿಶಂಕೆಗಳ ನಾನು ಬಲ್ಲೆ,
ಅದಕ್ಕೆಂದು ನೀನು ಹಿಂದೆ ಸರಿವುದನು ಒಲ್ಲೆ;
ಹಿಂದೆ ಕತ್ತಲು, ಮುಂದೆ ಭಯಭೀತಿ ಸುತ್ತಲು,
ಎದೆಗಟ್ಟಿ ಹಿಡಿದು ಮುಂದೆ ನಡೆ, ನನ್ನ ನಲ್ಲೆ.

ಕತ್ತಲಲಿ ಹುದುಗಿ ಬೆಳಕು ಕಂಡವರಿಲ್ಲ,
ಭಯಭೀತಿಗೆದೆಕೊಟ್ಟು ನಾವು ಬದುಕಬೇಕು;
ಜೊತೆಯಾಗಿ ನಡೆದರೆ ಕೈಗೆಟಕದುದಿಲ್ಲ,
ಈ ಪರಿಯ ಅಳುಕುಶಂಕೆ ನಿನಗೆ ಸಲ್ಲ.

ನಿನ್ನ ಸ್ವಾಗತಕ್ಕೆಂದು ಕಮಾನುಗಳ ಕಟ್ಟಿ,
ದಿಗಂತದುದ್ದಕ್ಕೆ ಕೆಂಪು ರತ್ನಗಂಬಳಿ ಮೆಟ್ಟಿ,
ವಾದ್ಯಫಿರಂಗಿತೋಪುಗಳ ಗೌರವವಿಟ್ಟು
ದಿನರಾತ್ರಿ ವರ್ಷಗಳಾಯಿತು, ನೀನು ಬರಲಿಲ್ಲ.

ಇಂದಲ್ಲದಿದ್ದರೆ ನಾಳೆ ನೀನು ಬರುವಿ, ಗೊತ್ತು,
ಮತ್ತೇಕೆ ನಿನಗೆ ಈ ರೀತಿಯ ಗತ್ತು?
ಇದ್ದದನ್ನೆಲ್ಲ ಕಟ್ಟಿಟ್ಟು, ಛಲಹಿಡಿದು ಬಾರೆ,
ನಿನ್ನನನ್ನ ಬೆಸೆತಕ್ಕೆ ಹೊಸ ಕಸುವು ತಾರೆ.

by Praveen Kumar in Divya Belaku

Comments (0)

There is no comment submitted by members.